ಸೋದೆ ಅರಸರು -
	16ನೆಯ ಶತಮಾನದ ಮಧ್ಯಭಾಗದಿಂದ 18ನೆಯ ಶತಮಾನದ ಮೂರನೆಯ ಪಾದದವರೆಗೆ, ಆರಂಭದಲ್ಲಿ ವಿಜಯನಗರದ ಅರಸರ, ಮುಂದೆ ಕೆಳದಿ ಮತ್ತು ಬಿಜಾಪುರದ ಅರಸರ ಮಾಂಡಲಿಕರಾಗಿ ಆಳುತ್ತಿದ್ದ ಒಂದು ರಾಜಮನೆತನ. ಇವರ ರಾಜಧಾನಿ ಸೋದೆ (ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು). ಬನವಾಸಿ 12,000 ನಾಡು ತಮ್ಮ ರಾಜ್ಯವೆಂದು ಇವರು ಹೇಳಿಕೊಂಡಿದ್ದಾರೆ. ಶಿರಸಿ, ಅಂಕೋಲ, ಕಾರವಾರ, ಹಳಿಯಾಳ ತಾಲ್ಲೂಕುಗಳ ಹಾಗೂ ಇಂದಿನ ಗೋವೆಯ ಕೆಲ ಪ್ರದೇಶಗಳ ಮೇಲೆ ಇವರ ಆಡಳಿತವಿತ್ತು.

	ಒಂದು ಶಾಸನದ ಪ್ರಕಾರ ಸೋದೆಯ ಸಂಕಣ್ಣನಾಯಕ ಮತ್ತು ಅವನ ಮಗ ಅರಸಪ್ಪನಾಯಕ ಈ ವಂಶದ ಆದ್ಯರು. ಮೊದಲ ದೊರೆ ವೆಂಕಟಪ್ಪನಾಯಕ. ಅನಂತರ ರಾಮಚಂದ್ರ, ವಜ್ರವಡೇರ ಹಾಗೂ ದೇವರಾಜ ಎಂಬುವರ ಅನುಕ್ರಮ ಬಖೈರುಗಳಿಂದ ತಿಳಿಯುತ್ತದೆ. ವಿಜಯನಗರದ ಕೃಷ್ಣದೇವರಾಯ ತನ್ನ ಸಹೋದರಿಯ ಮಗ ಅರಸಪ್ಪನಾಯಕನಿಗೆ ಸ್ವಾದಿಯನ್ನು ಕೊಟ್ಟನೆಂದೂ ಈತ ಅನಂತರದಲ್ಲಿ ಈ ಪ್ರದೇಶದ ನಾಯಕನಾಗಿ ಆಳಲು ಪ್ರಾರಂಭಿಸಿದನೆಂದೂ ಹೇಳಿಕೆ ಇದೆ. ಅರಸಪ್ಪನಾಯಕ (ಸು. 1555-98) ಸ್ಪಷ್ಟವಾಗಿ ತಿಳಿದಿರುವ ಈ ವಂಶದ ಮೊದಲ ದೊರೆ. 1591, 93, 95ರ ಇವನ ಶಾಸನಗಳು ದೊರಕಿದ್ದು, ಅವುಗಳಲ್ಲಿ ಇಮ್ಮಡಿ ಅರಸಪ್ಪನೆಂದು ಉಲ್ಲೇಖಿತನಾಗಿ ದ್ದಾನೆ. ಈತ 1578-79ರ ಸುಮಾರಿನಲ್ಲಿ ಬಿಜಾಪುರದ ಜೊತೆ ಸೇರಿ ಕೆಳದಿಯ ವಿರುದ್ಧ ಯುದ್ಧಹೂಡಿದ್ದ. ಈತ ಖ್ಯಾತ ಮಾಧ್ವಸಂನ್ಯಾಸಿಗಳಾದ ಸೋದೆ ಮಠದ ವಾದಿರಾಜತೀರ್ಥರ ಭಕ್ತನಾಗಿದ್ದ. ಮುಂದೆ ಅರಸಪ್ಪನ ಮಗ ರಾಮಚಂದ್ರ, ಅವನ ಮಗ ರಘುನಾಥ (1611-29) ಆಳಿದರು. ರಘುನಾಥ ಮಾಧ್ವ ಸಂಪ್ರದಾಯ ತೊರೆದು ವೀರಶೈವನಾದ. ಈತ 1611ರಲ್ಲಿ ವಿಜಯನಗರದ ಮಾಂಡಲಿಕನಾಗಿದ್ದಂತೆ ಒಂದು ಶಾಸನದಿಂದ ತಿಳಿಯುತ್ತದೆ. ಮಧುಲಿಂಗನಾಯಕ, ಸದಾಶಿವನಾಯಕ (1694), ಇಮ್ಮಡಿ ಸದಾಶಿವನಾಯಕ (1696-1702) ಇವರು ಆಮೇಲೆ ಆಳಿದ ದೊರೆಗಳು. ಬಿಜಾಪುರದ ಪತನಾನಂತರ ಸೋದೆಯ ದೊರೆಗಳು ಮರಾಠರ, ಮುಂದೆ ಮುಗಲರ ಅನಂತರ ಮತ್ತೆ ಮರಾಠರ ಮಾಂಡಲಿಕರಾಗಿದ್ದರು. ಇಮ್ಮಡಿ ಸದಾಶಿವನಾಯಕ ಮರಾಠರಿಂದ ಪಂಚಮಹಾಲ್ ಪ್ರದೇಶ ಪಡೆದು, ಅವರಿಗೆ ಕಪ್ಪ ನೀಡಲು ಒಪ್ಪಿದ. 1706ರಲ್ಲಿ ಮುಗಲರು ಪೊಂಡ (ಈಗಿನ ಪೋಂಡಾ) ಕೋಟೆ ಮತ್ತು ಸುತ್ತಲ ಕೆಲವು ಪ್ರದೇಶಗಳನ್ನು ಸೋದೆಗೆ ನೀಡಿ 80,000 ರೂಪಾಯಿಗಳ ವಾರ್ಷಿಕ ಪೊಗದಿ ಪಡೆಯಲು ನಿರ್ಧರಿಸಿದರು. ಬಸವಲಿಂಗನಾಯಕ, ಇಮ್ಮಡಿ ಬಸವಲಿಂಗನಾಯಕ (1705-32) ಹಾಗೂ ಸದಾಶಿವ ಮುಂದಿನ ದೊರೆಗಳು. ಇಮ್ಮಡಿ ಬಸವಲಿಂಗನಾಯಕ ಕೊಲ್ಲಾಪುರದ ಮರಾಠರ ಸಾಮಂತನಾಗಿದ್ದ (ಸು. 1715-18). 1764ರಲ್ಲಿ ಹೈದರ್ ಸೋದೆಯನ್ನು ಗೆದ್ದುಕೊಂಡ. ಈ ವಂಶದವರು ಗೋವೆಯ ಪ್ರದೇಶದಲ್ಲಿ ಪೋರ್ಚುಗೀಸರ ಆಶ್ರಯಪಡೆದರು. ಅಲ್ಲಿಯೂ ಕೆಲಕಾಲ ರಾಜಕೀಯ ಚಟುವಟಿಕೆಯನ್ನು ಮುಂದುವರಿಸಿದರೂ ಕಳೆದುಕೊಂಡ ರಾಜ್ಯವನ್ನು ಮತ್ತೆ ಪಡೆಯಲಾಗಲಿಲ್ಲ. ಈ ವಂಶಸ್ಥರು ಈಗಲೂ ಗೋವ ರಾಜ್ಯದ ಪೋಂಡಾ ಎಂಬಲ್ಲಿದ್ದಾರೆ.

	ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ಸುಂದರ ಕೆತ್ತನೆಯ ಕಲ್ಲುಮಂಚ ಮತ್ತು ಆಸನ ಇವರ ಕಾಲದ ಅಸಾಮಾನ್ಯ ಕಲಾಕೃತಿಗಳು. ಸದಾಶಿವಗಡ ಕೋಟೆ ಸಹ ಇವರ ಕಾಲದ್ದು. ಬಿಳಗಿ ಮತ್ತು ಕೆಳದಿ ರಾಜವಂಶಗಳ ಜೊತೆ ರಕ್ತಸಂಬಂಧಹೊಂದಿದ್ದ ಈ ವಂಶ ಕೊಂಕಣ ಪ್ರದೇಶದಲ್ಲಿನ ಪೋರ್ಚುಗೀಸರ, ಮರಾಠರ ಮತ್ತು ಮುಗಲರ ಚಟುವಟಿಕೆಗಳ ಕಥನಗಳಲ್ಲಿ ತತ್ಕಾಲದ ರಾಜಕೀಯದಲ್ಲಿ ಪ್ರಧಾನ ಪಾತ್ರವಹಿಸಿದ ಒಂದು ರಾಜಸತ್ತೆಯಾಗಿ ಹೇಳಿದೆ.    	
	 (ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ